ಅನ್ಸಿಡಿಯಮ್
ಆರ್ಕಿಡೇಸೀ ಕುಟುಂಬಕ್ಕೆ ಸೇರಿದ ಒಂದು ಜಾತಿಯ ಅಲಂಕಾರ ಸಸ್ಯ. ಇದರಲ್ಲಿ ಸುಮಾರು 750 ಪ್ರಭೇದಗಳಿವೆ. ಈ ಜಾತಿಯ ಅನೇಕ ಸಸ್ಯಗಳು ಮರಗಳ ಮೇಲೆ ಅಪ್ಪುಸಸ್ಯಗಳಾಗಿಯೂ ಕೆಲವುಮಾತ್ರ ನೆಲಸಸ್ಯ, ಮತ್ತು ಶಿಲಾಸಸ್ಯಗಳಾಗಿಯೂ (ಲಿತೋಫೈಟ್) ಬೆಳೆಯುತ್ತದೆ. ಇವುಗಳನ್ನು ಪೂರ್ಣವಾಗಿ ವಿವರಿಸುವುದು ಕಷ್ಟವಾದರೂ ಮೂಲಗುಣಗಳನ್ನು ಸ್ಪಲ್ಪಮಟ್ಟಿಗೆ ಪರಿಶೀಲಿಸಬಹುದು. ಅನ್ಸಿಡಿಯಮ್ ಜಾತಿಯಲ್ಲಿ, ನಕಲಿಲಶುನ (ಸ್ಯೂಡೊಬಲ್ಬ್ಸ್) ಇರುವ ಮತ್ತು ಇಲ್ಲದೆ ಇರುವ ಪ್ರಭೇದಗಳಿವೆ. ನಕಲಿಲಶುನಗಳಿರುವ ಪ್ರಭೇದಗಳಲ್ಲಿ ಇವು ಪೊರೆಯಂತಿರುವ ಉಪಎಲೆಗಳಿಂದ (ಬಾಕ್ಟ್ಸ್) ಆವರಿಸುತ್ತವೆ. ನಕಲಿಲಶುನಗಳು ಇಲ್ಲದೆ ಇರುವ ಪ್ರಭೇದಗಳಲ್ಲಿ ಎಲೆಗಳಿರುತ್ತದೆ. ಸಾಮಾನ್ಯವಾಗಿ ಪ್ರತಿಸಸ್ಯ ಒಂದು ಹೂಗೊಂಚಲನ್ನು ಮಾತ್ರ ಬಿಡುತ್ತದೆ. ಹೂಗೊಂಚಲು ಉದ್ದವಾಗಿ ನೇರವಾಗಿ ಓಲಾಡುತ್ತಿರುತ್ತದೆ ಅಥವಾ ಕಮಾನಿನಂತೆ ಬಾಗಿರುವುದೂ ಉಂಟು. ಹೂಗಳ ಬಣ್ಣ ಹಳದಿಯಿಂದ ಕಂದಿನವರೆಗೂ ಇರಬಹುದು. ಮಿಶ್ರಬಣ್ಣದ ಹೂಗಳೂ ಇರುವುದುಂಟು. ಹೂಗಳ ಆಕಾರ, ಗಾತ್ರಗಳಲ್ಲಿ ಬಹಳ ವೈವಿಧ್ಯವಿದೆ. ಸಾಮಾನ್ಯವಾಗಿ ಹೂಗಳ ತುಟಿ (ಲಿಪ್) ಮೂರು ಭಾಗವಾಗಿರುತ್ತದೆ. ಇದರ ಮಧ್ಯಭಾಗದಲ್ಲಿ ಗುಂಡಾಗಿ ಎತ್ತರಿಸಿದ ಬಿಲ್ಲೆ (ಡಿಸ್ಕ್) ಇರುತ್ತದೆ. ಈ ಬಿಲ್ಲೆಗಳು ಮಧ್ಯದಲ್ಲಿದ್ದು ಅವುಗಳ ಆಕಾರ, ಗಾತ್ರ, ಬಣ್ಣ ಮತ್ತು ಸಂಖ್ಯೆಯ ಆಧಾರದ ಮೇಲೆ ಹಲವು ಜಾತಿಗಳ ವಿಂಗಡಣೆ ಆಗಿದೆ. ಹೂವಿನ ಮಧ್ಯದಲ್ಲಿರುವ ಹೂಕಂಬ (ಕಾಲಮ್) ಕುಳ್ಳಾಗಿ ದಪ್ಪವಾಗಿದೆ. ಇದರ ಪಕ್ಕಗಳು ಶಿಕೆಗಳಂತೆ ಹರಡಿರುವುದುಂಟು. ಅನ್ಸಿಡಿಯಮ್ ಆರ್ಕಿಡ್‍ಗಳು ವರ್ಷದ ಬಹುಭಾಗದಲ್ಲಿ ಬೆಚ್ಚಗಿರುವ ಹಿತಕರವಾದ ಹವಾಗುಣದಲ್ಲಿ, ಯಶಸ್ವಿಯಾಗಿ ಬೆಳೆಯುತ್ತವೆ.

ಅನ್ಸಿಡಿಯಮ್ ಕ್ರಿಸ್‍ಪಮ್ ಎಂಬ ಪ್ರಭೇದದ ಸಸ್ಯಗಳಲ್ಲಿ ಗುಂಪಾದ ಆಯತಾಕಾರದ ಚಪ್ಪಟೆಯಾಗಿರುವ ನಕಲಿ ಲಶುನಗಳು ಇವೆ. ಇವುಗಳ ಎಲೆಗಳು ಆಯಾತಾಕಾರವಾಗಿದ್ದು 15-20 ಸೆಂ.ಮೀ. ಉದ್ದ 5 ಸೆಂ.ಮೀ. ಅಗಲ ಇರುತ್ತವೆ. ಹೂಗೊಂಚಲಿನಲ್ಲಿ 80 ಹೂಗಳಿರುತ್ತವೆ. ಬಣ್ಣ ಕಂದು, ತುದಿ ಹಳದಿ. ಗೊಂಚಲಲ್ಲಿ ಹೂಗಳು ಸಡಿಲವಾಗಿ ಜೋಡಣೆಯಾಗಿರುತ್ತವೆ.
ಅನ್ಸಿಡಿಯಮ್ ಲುರಿಡಮ್ ಎಂಬ ಪ್ರಭೇದದಲ್ಲಿ ನಕಲಿಲಶುನಗಳು ಇರುವುದಿಲ್ಲ. ಗುಪ್ತಕಾಂಡದಿಂದ ಕರನೆಯಾಕಾರದ ಚರ್ಮದಂತೆ ಒರಟಾಗಿರುವ ಎಲೆಗಳು ಹೊರಬಂದಿರುತ್ತವೆ. ಹೂಗೊಂಚಲಿನ ಉದ್ದ ಸು. 20 ಸೆಂ.ಮೀ.. ಇದರ ಕಾವಿನ ಬಣ್ಣ ಕೆಂಪು ಮಿಶ್ರಿತ ಕಂದು. ಪ್ರತಿಹೂವಿನ ಅಗಲ ಸುಮಾರು 2.5 ಸೆಂ.ಮೀ. ಬಣ್ಣ ಕಂದು, ಹಳದಿ ಅಥವಾ ಕೆಂಪು ಮಿಶ್ರಿತ. ಒಂದು ಗೊಂಚಲಿನಲ್ಲಿ 6ರವರೆಗೆ ಹೂಗಳಿರುತ್ತವೆ. 

ಅನ್ಸಿಡಿಯಮ್ ಲಾಂಗಿ ಪೋಲಿಯವತ್ ಎಂಬ ಮಗುದೊಂದು ಪ್ರಬೇಧದಲ್ಲಿ ದಪ್ಪನೆಯ ಗುಪ್ತಕಾಂಡದ ಮೇಲೆ ಸಣ್ಣದಾಗಿರುವ ನಕಲಿ ಲಶುನಗಳಿರುತ್ತವೆ. ಪ್ರತಿ ನಕಲಿಲಶುನದಲ್ಲೂ ಕಿರಿದಾಗಿ ಉದ್ದವಾಗಿ ಅರ್ಧ ಕೊಳವೆಯಾಕಾರದ ಎಲೆಗಳು ಇರುತ್ತವೆ. ಹೂಗೊಂಚಲು ನೇರವಾಗಿದ್ದು ಹೂಗಳ ಸಂಖ್ಯೆ ನಿರ್ದಿಷ್ಟವಲ್ಲ. ಅವುಗಳ ಬಣ್ಣ ಹಳದಿ, ಗಾತ್ರ ಏಕರೀತಿಯದಲ್ಲ.           											
(ಡಿ.ಎಂ.)
									(ಪರಿಷ್ಕರಣೆ: ಕೆ ಬಿ ಸದಾನಂದ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ